1922ರಲ್ಲಿ ದಿ. ಫಾ. ಫಾವೊಸ್ತಿನ್ ಕೋರ್ಟಿಯವರಿಂದ ಸ್ಥಾಪಿಸಲ್ಪಟ್ಟ ನಾರಾವಿಯ ಸಂತ ಪಾವ್ಲ ಹಿರಿಯ ಪ್ರಾಥಮಿಕ ಶಾಲೆಯು ನೂರು ವರುಷಗಳನ್ನು ಪೂರೈಸಿದ ಸಂದರ್ಭದಲ್ಲಿ ಶಾಲೆಯ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಜೂನ್ 26ರಂದು ಶಾಲೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಥೋಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷರು ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹರವರು ಆಗಮಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾರವರು ಶತಮಾನೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿದ ಅವರು ನೂರು ವರುಷಗಳನ್ನು ಪೂರೈಸಿದ ಸಂತ ಪಾವ್ಲ ಶಿಕ್ಷಣ ಸಂಸ್ಥೆಯ ಸ್ಥಾಪಕರನ್ನು ಜ್ಞಾಪಿಸಿ ಅವರ ತ್ಯಾಗ ಮತ್ತು ಸೇವೆಯನ್ನು ಕೊಂಡಾಡಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ಈ ಸಂದರ್ಭದಲ್ಲಿ ಶಾಸಕರ ನಿಧಿಯಿಂದ 20 ಲಕ್ಷ ದೇಣಿಗೆ ನೀಡಿ ಚರ್ಚ್ ವಠಾರದ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಲು ಸಹಕರಿಸಿದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಜೋಯೆಲ್ ಮೆಂಡೋನ್ಸಾ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಶಾಲೆಯ ಸಂಚಾಲಕರಾದ ವಂದನೀಯ ಫಾದರ್ ಸೈಮನ್ ಡಿ’ಸೋಜ, ಪ್ರಾಂಶುಪಾಲರಾದ ವಂದನೀಯ ಫಾದರ್ ಆಲ್ವಿನ್ ಸೆರಾವೊ, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್ ರೊಡ್ರಿಗಸ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೋಫಿಯಾ ಫೆರ್ನಾಂಡಿಸ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಸಂಚಾಲಕರಾದ ವಂದನೀಯ ಫಾದರ್ ಸೈಮನ್ ಡಿ’ಸೋಜರವರು ಸ್ವಾಗತಿಸಿ ಉಪನ್ಯಾಸಕರಾದ ಶ್ರೀ ಸಂತೋಷ್ ಸಲ್ಡಾನ್ಹ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಜಾನೆಟ್ ಡಿ’ಸೋಜ ವಂದಿಸಿದರು.